ದಾದ್ರಾ ಮತ್ತು ನಗರ್ ಹವೇಲಿ

ಪಶ್ಚಿಮ ಭಾರತದಲ್ಲಿ, ಗುಜರಾತ್ ಮಹಾರಾಷ್ಟ್ರ ರಾಜ್ಯಗಳ ನಡುವೆ ಇರುವ ಸಂಘರಾಜ್ಯ ಕ್ಷೇತ್ರ (ಯೂನಿಯನ್ ಟೆರಿಟೊರಿ). ಮುಂಬಯಿಯ ಉತ್ತರಕ್ಕೆ 200 ಕಿಮೀ. (125 ಮೈ.) ದೂರದಲ್ಲಿದೆ. ಪೂರ್ವ ಮತ್ತು ಉತ್ತರದಲ್ಲಿ ಗುಜರಾತ್ ರಾಜ್ಯದ ಬಲ್ಸಾರ್ ಜಿಲ್ಲೆ, ದಕ್ಷಿಣ ಮತ್ತು ಪಶ್ಚಿಮ ದಿಕ್ಕುಗಳಲ್ಲಿ ಮಹಾರಾಷ್ಟ್ರದ ಠಾಣಾ ಜಿಲ್ಲೆ ಇವೆ. ಸಮುದ್ರಮಟ್ಟದಿಂದ ಸುಮಾರು 150 ಮೀ. ಎತ್ತರದಲ್ಲಿರುವ ಈ ಕ್ಷೇತ್ರದಲ್ಲಿ 3 ಹಳ್ಳಿಗಳನ್ನೊಳಗೊಂಡ ದಾದ್ರಾ ಮತ್ತು 69 ಹಳ್ಳಿಗಳನ್ನೊಳಗೊಂಡ ನಗರ್ ಹವೇಲಿ ಎಂಬ ಎರಡು ಭಾಗಗಳಿವೆ. ಇದರ ಒಟ್ಟು ವಿಸ್ತೀರ್ಣ 491 ಚ. ಕಿಮೀ. ಜನಸಂಖ್ಯೆ 74,170 (1971). ಆಡಳಿತ ಕೇಂದ್ರ ಸಿಲ್ವಸ್ಸಾ.

	ಮುಖ್ಯವಾಗಿ ಗುಡ್ಡಗಾಡಿನ ಈ ಪ್ರದೇಶ ಅರಣ್ಯಮಯ. ಒಟ್ಟು ವಿಸ್ತೀರ್ಣದಲ್ಲಿ ಸೇ 41.5ರಷ್ಟು ಅರಣ್ಯಗಳಿಂದ ಆವೃತವಾಗಿದೆ. ತೇಗ, ಸಾದ್ರ, ಖೇರ್ ಕಟಿ ಮತ್ತು ಕಾಕನ್ ಮರಗಳು ಸಮೃದ್ಧವಾಗಿ ಬೆಳೆಯುತ್ತವೆ. ಕ್ಷೇತ್ರದ ಒಟ್ಟು ವರಮಾನದಲ್ಲಿ ಕಾಲುಭಾಗದಷ್ಟು ಬರುವುದು ಅರಣ್ಯಗಳಿಂದಲೇ. ಜನರ ಮುಖ್ಯ ವೃತ್ತಿ ಬೇಸಾಯ. ಇಲ್ಲಿಯ ಮುಖ್ಯ ಬೆಳೆಗಳು ಬತ್ತ ಮತ್ತು ರಾಗಿ. ಸಾಗುವಳಿಯಲ್ಲಿರುವ 17,000 ಹೆಕ್ಟೇರುಗಳಲ್ಲಿ ಬತ್ತ ಮತ್ತು ರಾಗಿ ಬೆಳೆಯುವ ಜಮೀನಿನ ವಿಸ್ತೀರ್ಣ ಅನುಕ್ರಮವಾಗಿ 9,400 ಮತ್ತು 2,500 ಹೆಕ್ಟೇರುಗಳು. ಇತರ ಬೆಳೆಗಳು ಚೋಲಿ, ಮಂಗ್, ಬಜ್ರಿ, ಮುಸುಕಿನ ಜೋಳ ಮತ್ತು ಹತ್ತಿ. ಗೋಧಿಯನ್ನು ಎರಡನೆಯ ಬೆಳೆಯಾಗಿ ಬೆಳೆಯುತ್ತಾರೆ. ಇಲ್ಲಿ ದೊಡ್ಡ ನೀರಾವರಿ ಪರಿಯೋಜನೆಗಳೇನೂ ಇಲ್ಲ. ಜಂಟಿ ನೀರಾವರಿ ಪರಿಯೋಜನೆಯಾಗಿ ಗುಜರಾತ್ ಸರ್ಕಾರ ಕಾರ್ಯಗತಗೊಳಿಸುತ್ತಿರುವ ದಮನ್-ಗಂಗಾ ಕಟ್ಟೆಯಿಂದ ದಾದ್ರಾ ಮತ್ತು ನಗರ್ ಹವೇಲಿಯಲ್ಲಿ 6,800 ಹೆಕ್ಟೇರ್ ನೆಲ ನೀರಾವರಿಗೆ ಒಳಪಡುತ್ತದೆ. ಟಿಗ್ರ, ಖೇದ್ರಿ, ಖಡೋಲಿ-ಟಿಂಡೊಲ, ಖನವೇಲ, ಬಿಂದ್ರಾಬಿನ್‍ಗಳಲ್ಲಿ ನೆಲದ ಅಡಿಯ ನೀರಿನಿಂದ ಬೇಸಾಯ ನಡೆಯುತ್ತದೆ. ಕೆಲವರು ಗಣಿ ಉದ್ಯಮ, ಪಶುಪಾಲನೆ, ಮೀನುಗಾರಿಕೆ ಮತ್ತು ಕುಕ್ಕುಟ ಸಾಕಣೆಯಲ್ಲಿ ತೊಡಗಿದ್ದಾರೆ. ದಾದ್ರಾ ಮತ್ತು ನಗರ್ ಹವೇಲಿಯಲ್ಲಿ ದೊಡ್ಡ ಕೈಗಾರಿಕೆಗಳು ಯಾವುವೂ ಇಲ್ಲ. ಸಿಲ್ವಸ್ಸಾ ಬಳಿ ಕೈಗಾರಿಕಾ ಕ್ಷೇತ್ರವೊಂದು ಇದೆ. ಇಲ್ಲಿಯ ಜನಸಂಖ್ಯೆಯಲ್ಲಿ ಗಿರಿಜನರು ಸೇ. 86.83 ರಷ್ಟು ಇದ್ದಾರೆ. ಅಕ್ಷರಸ್ಥರು ಒಟ್ಟು ಜನಸಂಖ್ಯೆಯ ಸೇ. 14.86.

	ಸಿಲ್ವಸ್ಸಾದಲ್ಲಿ ಒಂದು ಆಸ್ಪತ್ರೆಯೂ ನರೋಲಿ ಮತ್ತು ದೂಧನಿಯಲ್ಲಿ ಔಷಧಾಲಯಗಳೂ ಕಿಲಾವನಿ ಮತ್ತು ಖನವೇಲದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳೂ ಇವೆ.

	ದಾದ್ರಾ ಮತ್ತು ನಗರ್ ಹವೇಲಿಯಲ್ಲಿ ಒಟ್ಟು 181.75 ಕಿಮೀ. ರಸ್ತೆಗಳಿವೆ. ಸಿಲ್ವಸ್ಸಾಗೆ ಅತ್ಯಂತ ಹತ್ತಿರದ ರೈಲ್ವೆ ನಿಲ್ದಾಣಗಳೆಂದರೆ ಸುಮಾರು 18 ಕಿಮೀ ದೂರದಲ್ಲಿರುವ ಪಶ್ಚಿಮ ರೈಲ್ವೆಯ ವಾಪಿ ಮತ್ತು ಭಿಲಾದ್.

	ಗೋವ, ದಮನ್ ಮತ್ತು ದೀವ್‍ನ ಉಪರಾಜ್ಯಪಾಲರೇ ದಾದ್ರಾ ಮತ್ತು ನಗರ್ ಹವೇಲಿ ಕ್ಷೇತ್ರಕ್ಕೂ ಮುಖ್ಯ ಆಡಳಿತಗಾರರು. ಆದರೆ ಅನುದಿನದ ವ್ಯವಹಾರಗಳನ್ನು ದಮನ್‍ನಲ್ಲಿರುವ ಕಲೆಕ್ಟರ್ ನೋಡಿಕೊಳ್ಳುವರು. ಈ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಒಂದು ವರಿಷ್ಠ ಪಂಚಾಯಿತಿ ಇದೆ. 21 ಜನ ಚುನಾಯಿತ ಸದಸ್ಯರಿಂದ ಕೂಡಿರುವ ಇದು ಆಡಳಿತಗಾರರಿಗೆ ಸಲಹಾ ಮಂಡಲಿಯಾಗಿ ಕೆಲಸ ಮಾಡುತ್ತದೆ.

	ಲೋಕ ಸಭೆಯಲ್ಲಿ ಈ ಕ್ಷೇತ್ರಕ್ಕೆ ಒಂದು ಸ್ಥಾನವಿದೆ. ಇದು ಗಿರಿಜನರಿಗೇ ಮೀಸಲಾಗಿದೆ.

	ದಾದ್ರಾ ಮತ್ತು ನಗರ್ ಹವೇಲಿಯ ಪ್ರಮುಖ ಪ್ರವಾಸಿ ಆಕರ್ಷಣೆಯ ಕೇಂದ್ರಗಳು ದುಧಾನಿ, ಖನವೇಲ್, ಕಿಲಾವಾಣಿ ಬೆಟ್ಟಗಳು ಮತ್ತು ಬೃಂದಾಬಿನ್. ಸಿಲ್ವಸ್ಸಾದಿಂದ 32 ಕಿಮೀ. ದೂರದಲ್ಲಿರುವ ದುಧಾನಿಯಲ್ಲಿ ಸೂರ್ಯಾಸ್ತಮಯ ತುಂಬ ಸುಂದರವಾಗಿರುತ್ತದೆ. 22 ಕಿಮೀ. ದೂರದಲ್ಲಿರುವ ಖನವೇಲ್, 11 ಕಿಮೀ. ದೂರದಲ್ಲಿರುವ ಕಿಲಾವಾಣಿ ಬೆಟ್ಟಗಳು ಮತ್ತು 21 ಕಿಮೀ. ದೂರದಲ್ಲಿರುವ ಬೃಂದಾಬಿನ್-ಇವು ನಿಸರ್ಗ ಸೌಂದರ್ಯದ ತಾಣಗಳು.

	ದಾದ್ರಾ ಮತ್ತು ನಗರ್ ಹವೇಲಿ 1789ರಲ್ಲಿ ಪೋರ್ಚುಗೀಸರ ಆಡಳಿತಕ್ಕೆ ಒಳಪಟ್ಟಿತು. ಅಲ್ಲಿಯ ಜನರು ಸ್ವತ್ರಂತ್ರ ಭಾರತದೊಂದಿಗೆ ಸೇರ್ಪಡೆಯಾಗಲು ಆಂದೋಲನ ನಡೆಸಿದರು. 1954ರ ಆಗಸ್ಟ್ 2ರಂದು ಅದರ ವಿಮೋಚನೆಯಾಯಿತು. ದಾದ್ರಾ ಮತ್ತು ನಗರ್ ಹವೇಲಿ ಭಾರತದಲ್ಲಿ ವಿಲೀನಗೊಂಡಿತು. ಪೋರ್ಚುಗೀಸರು ಈ ಸೇರ್ಪಡೆಯ ವಿರುದ್ಧ ವಿಶ್ವನ್ಯಾಯಾಲಯಕ್ಕೆ ದೂರಿತ್ತಿದ್ದರು. ಆದರೆ ಅಂತ್ಯದಲ್ಲಿ ನ್ಯಾಯಾಲಯ ಭಾರತದ ಪರವಾಗಿ ತೀರ್ಪಿತ್ತಿತು. 1961ರ ಅಧಿನಿಯಮವೊಂದರ ಪ್ರಕಾರ ಇದನ್ನು ಸಂಘರಾಜ್ಯ ಕ್ಷೇತ್ರವನ್ನಾಗಿ ಪರಿಗಣಿಸಲಾಯಿತು.
(ಎಸ್.ಎಸ್.ಆರ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ